ಚರ್ಚ್, ರಿಚರ್ಡ್ -
1893- . ಇಂಗ್ಲಿಷ್ ಕವಿ ಮತ್ತು ಕಾದಂಬರಿಕಾರ. ವಿಮರ್ಶಕ, ಪ್ರವಾಸಲೇಖಕ ಹಾಗೂ ಮಕ್ಕಳ ಕಥೆಗಾರ ಎಂದೂ ಹೆಸರಾಗಿದ್ದಾನೆ. ಲಂಡನಿನಲ್ಲಿ ಹುಟ್ಟಿದ ಈತ ಡಲೆಚ್ ಹ್ಯಾಮಲೆಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ. ತನ್ನ 16ನೆಯ ವಯಸ್ಸಿನಲ್ಲಿ ಲೋಕಸೇವಾ ಇಲಾಖೆಗೆ ಸೇರಿ 40ನೆಯ ವಯಸ್ಸಿನವರೆಗೂ ಸೇವೆಸಲ್ಲಿಸಿದ. ದಿ ಫ್ಲಡ್ ಆಫ್ ಲೈಫ್ (1917) ಈತನ ಮೊದಲ ಕವನ ಸಂಗ್ರಹ. ಅನಂತರ ಈತನ ಹತ್ತು ಕವನ ಸಂಗ್ರಹಗಳು ಹೊರಬಂದವು. ಅವುಗಳಲ್ಲಿ ದಿ ಗ್ಲಾನ್ಸ್ ಬ್ಯಾಕ್‍ವರ್ಡ್(1930), ನ್ಯೂಸ್ ಫ್ರಂ ದಿ ಮೌಂಟನ್(1934), ದಿ ಸಾಲಿಟರಿ ಮ್ಯಾನ್(1941) ಪ್ರಮುಖವಾದವು. 1948ರಲ್ಲಿ ಈತನ ಸಮಗ್ರ ಕವನಗಳ ಸಂಗ್ರಹ ಪ್ರಕಟಗೊಂಡಿತು. ಅನಂತರ ದಿ ಪ್ರಾಡಿಗಲ್(1953), ದಿ ಇನ್‍ಹೆರಿಟರ್ಸ್(1957) ಪ್ರಕಟಗೊಂಡವು.

ಆಲಿವರ್ಸ್ ಡಾಟರ್(1930), ಹೈ ಸಮರ್(1931), ದಿ ಪ್ರಾಡಿಗಲ್ ಫಾದರ್(1933), ಆ್ಯಪಲ್ ಆಫ್ ಕನ್‍ಕಾರ್ಡ್ (1935), ದಿ ಪೋರ್ಚ್(1937), ದಿ ಸ್ಟ್ರಾಂಗ್ ಹೋಲ್ಡ್(1939), ದಿ ರೂಮ್ ವಿದಿನ್(1940), ದಿ ಸ್ಯಾಂಪ್ಲರ್ (1942), ಗ್ರೀನ್ ಟೈಡ್(1944), ದಿ ಡೇಂಜರಸ್ ಇಯರ್ಸ್(1956)-ಇವು ಈತನ ಪ್ರಮುಖ ಕಾದಂಬರಿಗಳು.

ಮೇರಿ ಷೆಲ್ಲಿ(1928), ಎಯ್ಟ್ ಫಾರ್ ಇಮ್ಮೊರಾಲಿಟಿ(1941), ಬ್ರಿಟಿಷ್ ಆಥೆರ್ಸ್(1943), ದಿ ಗೋತ್ ಆಫ್ ದಿ ಇಂಗ್ಲಿಷ್ ನಾವೆಲ್(1950)-ಇವು ಈತನ ವಿಮರ್ಶಾತ್ಮಕ ಗ್ರಂಥಗಳು. 1945ರಲ್ಲಿ ಎಂ.ಎಂ. ಬೊಜ್‍ಮನ್ನನ ಜೊತೆಗೂಡಿ ಪೋಯೆಮ್ಸ್ ಆಫ್ ಅವರ್ ಟೈಮ್ ಎಂಬ ಗ್ರಂಥವನ್ನು ಸಂಪಾದಿಸಿದ. 1955ರಲ್ಲಿ ಓವರ್‍ದ ಬ್ರಿಜ್ ಎಂಬ ಜೀವನಚರಿತ್ರೆಯನ್ನು ಬರೆದು ಪ್ರಕಟಿಸಿದ. ಇದು ಸಂಡೆ ಟೈಮ್ಸ್‍ನ ಸಾಹಿತ್ಯಿಕ ಬಹುಮಾನ ಗಳಿಸಿತು. ಇದರ ಉತ್ತರಾರ್ಧ ದಿ ಗೋಲ್ಡನ್ ಸಾವರಿನ್ 1957ರಲ್ಲಿ ಪ್ರಕಟಗೊಂಡಿತು. ಈತನ ಗದ್ಯ ಮತ್ತು ಪದ್ಯಗಳಲ್ಲಿ ಜನಸಾಮಾನ್ಯರ ಜೀವನಾನುಭವಗಳ ಯಥಾಚಿತ್ರವನ್ನು ಕಾಣಬಹುದಾಗಿದೆ. 1957ರಲ್ಲಿ ಈತನಿಗೆ ಸಿ.ಬಿ.ಇ. ಪ್ರಶಸ್ತಿ ಬಂತು.				*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ